Friday, December 19, 2014

ಕ್ರಿಕೆಟಿಗೆ, ಪ್ರೀತಿಯಿಂದ - ಫಿಲ್ ಹ್ಯೂಸ್ ಸ್ಮರಣಾರ್ಥ ಕಪ್ - 2014


ನೆಡೆದು ಬಂದ ದಾರಿಯ ಮರೆಯದಿರು ಅನ್ನೊ ಸಾಲುಗಳನ್ನು ಎಷ್ಟು ಬಾರಿ ಕೇಳಿಲ್ಲ, ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸುತ್ತ, ಸಾಲು ಸಾಲಾಗಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತ ಹಾಗು ತಮ್ಮೆಲ್ಲರ ಕೈಯಿಂದ ಸಾದ್ಯವಾದಷ್ಟು ಕೊಡುಗೆ ನೀಡಿ ನಮ್ಮ ಹಳೆಯ ವಿದ್ಯಾರ್ಥಿಗಳ ಸಂಘ ಕೈಗೊಂಡ ಕೆಲಸಗಳೆಲ್ಲವೂ ಶ್ಲಾಘನೀಯ. ಸಾಕಷ್ಟು ಸಮಾನ ಮನಸ್ಕರ ಮತ್ತು ಸಹೃದಯಿಗಳ ಸಹಾಯದ ಹೊರೆತು ಇದೆಲ್ಲ ಸಾದ್ಯವಾಗಿರಲಿಕ್ಕಿಲ್ಲ. ಇತ್ತಿಚಿನ ದಿನಗಳಲ್ಲಿ ನಮ್ಮ ತಿಪಟೂರಿನಲ್ಲಿ ಕೈಗೊಂಡ ಹತ್ತು ಹಲವು ಉತ್ತಮ ಸಾಮಾಜಿಕ ಕಾರ್ಯಗಳಲ್ಲಿ ಇದೂ ಒಂದು.


ಇನ್ನೂ ಎಚ್ಚು ಶ್ಲಾಘನೀಯವಾದಂತ ವಿಷಯ ಎಂದರೆ, ಈ ಬಾರಿ ನೆಡೆಯುವ ಕ್ರಿಕೆಟ್ ಪಂದ್ಯಾವಳಿಯನ್ನು ಫಿಲ್ ಹ್ಯೂಸ್ ಸ್ಮರಣಾರ್ಥ ಅಂತ ನೆಡೆಸಲು ಉದ್ದೇಷಿಸಿರುವುದು. ಸದ್ಯದ ಸ್ಥಿತಿಯಲ್ಲಿ ಇದನ್ನು ಬಿಟ್ಟು ಬೇರೆ ಏನಾದ್ರು ಹೆಸರು ಇಡಬಹುದಿತ್ತ? ನನ್ನ ಪ್ರಕಾರ "ಇಲ್ಲ" ಹಾಗು ತುಂಬಾ ಜನ ಇದನ್ನು ನಿರಾಕರಿಸಲಾರರು. ಏನೇ ಆದರು ಫಿಲ್ ಒಬ್ಬ ಅಪ್ರತಿಮ ಕ್ರೀಡಾಪಟು, ಪ್ರತೀ ಬಾರಿ ಮೈದಾನಕ್ಕೆ ಇಳಿದಾಗ ಹೊರಾಡಿ ನಮ್ಮನೆಲ್ಲ ರಂಜಿಸಿ, ಕೊನೆಗೆ ಯಾರು ಎಣಿಸಿರದ ಒಂದು ಆಘಾತಕಾರಿ ಸಾವಿಗೆ ಶರಣಾದವ. ಫಿಲ್ ನ ಗೌರವಾರ್ಥ ಈತನ ಹೆಸರಿನಲ್ಲಿ ಈ ಬಾರಿಯ ಪಂದ್ಯಾವಳಿ ಆಯೋಜಿಸಿರುವುದು ಒಂದು ಒಳ್ಳೆ ನಿರ್ಧಾರ ಅನ್ನೊದ್ರಲ್ಲಿ ಎರಡು ಮಾತಿಲ್ಲ. ಫಿಲ್, ಉಜ್ವಲ ಭವಿಷ್ಯದಲ್ಲಿ ಒಬ್ಬ ಉತ್ತಮ ಹಾಗು ಎಲ್ಲರ ನೆನಪಿನಲ್ಲುಳಿಯುವಂತ ಕ್ರಿಕೆಟಿಗನಾಗುವ ಎಲ್ಲ ಲಕ್ಷಣಗಳನ್ನು ಹೊಂದಿದವನು ಆದರೆ ದೇವರ ಇಚ್ಛೆಯೇ ಬೇರೆ ಇತ್ತು. ಎಲ್ಲಾ ಒಳ್ಳೆಯ ಸಂಗತಿಗಳು ಒಂದು ದಿನ ಕೊನೆಗೊಳ್ಳಲೇಬೇಕು ಆದರೆ ಫಿಲ್ ನ ವಿಷಯದಲ್ಲಿ ಒಂದು ಮಹಾಪಯಣ ಆರಂಭದಲ್ಲೆ ಅಂತ್ಯಗೊಂಡ್ಡಿದ್ದು ವಿಷಾದನೀಯ. ಈ ಚಾಂಪಿಯನ್ನನ  ನೆನಪಿಗಾಗಿ ಈ ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಿರುವುದು ಸ್ವಾಗತಾರ್ಹ.

ನಾವೆಲ್ಲ ಎರಡು ದಿನಗಳ ಮಟ್ಟಿಗೆ ನಮ್ಮ ದಿನನಿತ್ಯದ ಜಂಜಾಟಗಳನ್ನು ಬದಿಗಿಟ್ಟು ಒಂದೆಡೆ ಸೇರಿ ಆಡಿ, ನಕ್ಕು ನಲಿದು ಸಂತೋಷದ ಕ್ಷಣಗಳನ್ನು ಕಳೆಯಲು ಕ್ರಿಕೆಟ್ ಪಂದ್ಯಾವಳಿ ಒಂದು ಕಾರಣವಷ್ಟೆ. ಹಾಗೆಯೇ ನಾವು ಮತ್ತು ನಮ್ಮ ಹಳೆಯ ಗೆಳೆಯರೆಲ್ಲ ಒಂದೆಡೆ ಸೇರಿ ಹಲವು ವರ್ಷಗಳ ಹಿಂದಿನ ಸವಿ ನೆನಪುಗಳನ್ನೆಲ್ಲ ಮೆಲಕು ಹಾಕಲು ಒಂದು ಸುಸಂದರ್ಭ ಕೂಡ ಹೌದು. ಇದರ ಜೊತೆಗೆ ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೂ ಕೂಡ ಈ ಪಂದ್ಯಾವಳಿಗಳನ್ನು ಗೌರವಪೋರ್ವಕವಾಗಿ ಸಮರ್ಪಿಸುವುದು ಸಂಘದವರು ನಡೆಸಿಕೊಂಡು ಬಂದಿರುವ ಒಂದು ವಾಡಿಕೆ. ಕಳೆದ ಬಾರಿ ನಮ್ಮ ಭಾರತೀಯ ತಂಡದ ಮಾಜಿ ಹಾಗು ಸಜ್ಜನ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಗೌರವಾರ್ಥ ನೆಡೆಸಲಾಗಿತು.  ಈ ಬಾರಿ ಮತ್ತೊಮ್ಮೆ ಮತ್ತೊಂದು ಪಂದ್ಯಾವಳಿ, ನಾವೆಲ್ಲ ಪ್ರೀತಿಸುವ ಕ್ರೀಡೆ, ಕ್ರಿಕೆಟ್ ಆಡುತ್ತ ಕೆಲವು ದಿನಗಳ ಕೆಳಗೆ ಮೈದಾನದಲೇ ಪ್ರಾಣತೆತ್ತ ಯುವ ಪ್ರತಿಭೆ, ಫಿಲ್ ಹ್ಯೂಸನ  ಹೆಸರಿನಲ್ಲಿ. ಇಂತಹ ಪಂದ್ಯಾವಳಿಗಳನ್ನು ಆಯೋಜಿಸಿ ಸಂಗ್ರಹಿಸಿದ ದೇಣಿಗೆಯನ್ನು ಸಾಮಾಜಿಕ ಸತ್ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ. ಭವಿಷ್ಯದ ಉತ್ತಮ ದೃಷ್ಟಿಕೋನವನ್ನು ಹೊಂದಿರುವ ಸಮಾನ ಮನಸ್ಕರ ಸಣ್ಣ ಗುಂಪು ಸಾದ್ಯವಾದಷ್ಟು ಹಳೆಯ ವಿದ್ಯಾರ್ಥಿಗಳನೆಲ್ಲ ಒಂದೆಡೆ ಸೇರಿಸಿ, ಒಗ್ಗೂಡಿಸಿ ಒಂದು ಕಾರ್ಯಾತ್ಮಕ ಶಕ್ತಿಯನ್ನಾಗಿಸಿ ಆರಂಭಿಸಿದ್ದೆ ಈ "ಹಳೆಯ ವಿದ್ಯಾರ್ಥಿಗಳ ಸಂಘ". ನಿಜ ಹೇಳಬೇಕೆಂದರೆ, ಇಂತಹ ಕಾರ್ಯಕ್ರಮಗಳ ಸಂಘಟಿತ ಯಶಸ್ಸು ಎಲ್ಲ ಸಮಾನ ಮನಸ್ಕರ ನಡುವೆ ಒಳ್ಳೆಯ ಬಾಂಧವ್ಯ ಬೆಳೆಸಿ, ಸಾಮಾಜಿಕ ಕಾಳಜಿ ವೃದ್ದಿಸಿ ತಮ್ಮ ವ್ಯಕ್ತಿವಿಕಾಸಕ್ಕೆ ಹಾಗು ತಾವು ಇಂದು ಜೀವನದಲ್ಲಿ ಏನನ್ನಾದರು ಸಾದಿಸಿದ್ದಲ್ಲಿ ಅದಕ್ಕೆ ಸಮಾಜದ ಪಾಲು ಕೂಡ ಮುಖ್ಯವಾದದ್ದು ಎಂದು ಅರಿವು ಮೂಡಿಸುತ್ತದೆ. ಇಂತಹ ಅರಿವುಗಳ ಸಂಗಮವೇ ಈ ಸಂಘದ ಬದ್ರ ಬುನಾದಿ ಹಾಗು ಆಗಿರುವ, ಮುಂದೆ ಆಗಲಿರುವ ಸತ್ಕಾರ್ಯಗಳಿಗೆ ಸ್ವಯಂಪ್ರೇರಿತ ಸಹಾಯ ಹಸ್ತ ಚಾಚಲು ಪ್ರೇರಣೆ. ಸಂಘ ಪ್ರಾರಂಭವಾಗಿ 3-4 ವರ್ಷಗಳಿಂದ ಅದರ ವತಿಯಿಂದ ಈಗಾಗಲೇ ಹತ್ತು ಹಲವು ಅರ್ಥಪೂರ್ಣ ಕಾರ್ಯಗಳು ಯಶಸ್ವಿಯಾಗಿ ಅನುಷ್ಟಾನಗೊಂಡಿರುವುದೆ ಇದಕ್ಕೆ ಸಾಕ್ಷಿ. ಇಂತಹ  ಯಶಸ್ಸಿಗೆ ಸಿಕ್ಕಂತಹ ಪ್ರತಿಕ್ರಿಯೆ ಕೂಡ ಅಷ್ಟೇ ಆಶದಾಯಕವಾಗಿದೆ. ಜನರು, ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ತಮ್ಮ ಕಡೆಯಿಂದ ಎಲ್ಲಾ ರೀತಿಯಾಗಿ ಸಾದ್ಯವಾದಷ್ಟು ಕೊಡುಗೆ ಕೊಡುತ್ತಾ ಬಂದಿದ್ದಾರೆ. ಕಳೆದ ಆಗಸ್ಟಿನಲ್ಲಿ ನಡೆದ ಪಂದ್ಯಾವಳಿಗೆ HDFC ಯಂತಹ ಬಹುರಾಷ್ಟ್ರೀಯ ಬ್ಯಾಂಕ್ ಸಂಸ್ಥೆಗಳು ಕೂಡ ಪ್ರಾಯೋಜಕತ್ವ ವಹಿಸಿದ್ದವು.

ಸಂಘದ ಮೊತ್ತಮೊದಲ ಹಾಗು ಎಲ್ಲರಿಗೂ ಗೋಚರಿಸುವಂತಹ ಕೆಲಸವೆಂದರೆ GBHS ಶಾಲೆಯ ದುರಸ್ತಿ ಕಾರ್ಯ. 1924ರಲ್ಲಿ ಬ್ರಿಟೀಷರು ಸ್ಥಾಪಿಸಿದ ಈ ಶಾಲೆಯಲ್ಲಿ ಕಾಣುವಂತಹ ಸುಧಾರಣೆಗಳನ್ನೂ ಕಂಡು ಹಲವು ವರ್ಷಗಳೇ ಆಗಿದ್ದವು. ಶಾಲೆಯ ಅಗತ್ಯ ಮೂಲಭೂತ ವ್ಯವಸ್ಥೆಗಳ ಅಪೂರ್ಣತೆ ಮತ್ತು ಕೆಲವು ಕಡೆ ಶಿಥಿಲಗೊಂಡ ಕಟ್ಟಡದ ಸ್ಥಿತಿಯನ್ನು ಗ್ರಹಿಸಿ, ಸಂಘವು ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಒಂದು ಸಂವಾದವನ್ನು/ಸಭೆಯನ್ನು ಏರ್ಪಡಿಸಿದ ನಂತರ ಶಾಲೆಯ ಆಡಳಿತವರ್ಗದ ಜೊತೆ ಚರ್ಚಿಸಿ ಸಂಘದ ಕಡೆಯಿಂದ ಕೈಗೊಳ್ಳಬಹುದಾದಂತಹ ಶಾಲಾಭಿವೃದಿ ಕಾರ್ಯಗಳ ಒಂದು ಪಟ್ಟಿ ಸಿದ್ದಪಡಿಸಿಕೊಂಡಿತು. ಅದರಲ್ಲಿ ಮುಖ್ಯವಾದವುಗಳೆಂದರೆ ಶಾಲೆಗೆ ಹೊಸ ಕಟ್ಟಡಗಳನ್ನು ಕಟ್ಟಿಸುವಲ್ಲಿ ಸಹಕರಿಸಿದ್ದು, ಹೊಸ ಬೋರ್ಡುಗಳನ್ನು ಮಾಡಿಸಿದ್ದು, ಗೋಡೆಗಳಿಗೆ ಸುಣ್ಣಬಣ್ಣದ ಲೇಪನ, ನೆಲದ ದುರಸ್ತಿ ಕಾರ್ಯ, ಮೇಲ್ಚಾವಣಿಯ ದುರಸ್ತಿ ಕಾರ್ಯ ಹಾಗು ಇನ್ನೂ ಹತ್ತು ಹಲವು ಜನೋಪಯೋಗಿ ಕೆಲಸಗಳನ್ನು ಅನುಷ್ಟಾನಗೊಳ್ಳಿಸಿದ್ದು. ಶಾಲಾ ಮೈದಾನದ ಸುತ್ತ ಕೆಲವು ಕಡೆ ಆಗಿನ ಶಾಸಕರ ಸಹಾಯದಿಂದ ಗೋಡೆಗಳನ್ನು ಕಟ್ಟಿಸಲಾಯಿತು. ಶಾಲೆಗೆ ಒಂದು ಬೋರೆವೆಲ್ ಕೊರೆಸಿ ಶಾಶ್ವತವಾದ ಕುಡಿಯುವ  ನೀರಿನ ವ್ಯವಸ್ತೆಯನ್ನು ಮಾಡುವ ಯೋಜನೆ ಕೂಡ ಸಂಘದ ಮುಂದಿದೆ, ಸ್ಥಳೀಯ ಸರ್ಕಾರಿ ಆಡಳಿತ ಸಂಸ್ಥೆಗಳ ಸಹಯೋಗದಿಂದ ಸದ್ಯದಲ್ಲೇ  ನೆರವೇರುವುದರಲ್ಲಿದೆ. ಮುಂದಿನ ದಿನಗಳಲ್ಲಿ GBHS ಮಾದರಿಯಲ್ಲೇ ಸರ್ಕಾರಿ ಬಾಲಕೀಯರ ಶಾಲೆಯ ಅಭಿವೃದ್ದಿಯನ್ನೂ ಕೂಡ ಮಾಡುವ ಯೋಜನೆ ಸಂಘ ಹೊಂದಿದೆ. ಸಂಘವು ಇನ್ನೂ ಹಲವು ಜನಪರ ಕಾರ್ಯಗಳಿಗೆ ತನ್ನ ಸೇವೆ ಒದಗಿಸುತ್ತದೆ. ಇತ್ತೀಚಿನ ಒಂದು ಉದಾಹರಣೆ ಕೊಡುವುದಾದರೆ - ಖುಷಿ ಅನ್ನುವ ಒಂದು ಸಣ್ಣ ಹುಡುಗಿಯ ಬೆನ್ನಿನ ವಿಚಿತ್ರ ಕಾಯಿಲೆಗೆ ಆಪರೇಷನ್ ಮಾಡಿಸಲು ಹುಡುಗಿಯ ಪೋಷಕರು ಆರ್ಥಿಕ ಬಿಕ್ಕಟ್ಟಿನ್ನು ಎದುರಿಸುತ್ತಿರುವಾಗ, ಸಂಘವು ತನ್ನ ಕಡೆ ಇಂದ 12000 ಸಾವಿರ ರೂಪಾಯಿಗಳನ್ನು ಸಹಾಯದ ರೂಪದಲ್ಲಿ ನೀಡಿ ಸಹಕರಿಸಿತ್ತು. ಇನ್ನು ಹತ್ತು ಹಲವು ಕಾರ್ಯಗಳಲ್ಲಿ ತನ್ನ ಸಹಾಯ ಹಸ್ತ ಚಾಚಿದೆ ಮತ್ತೆ ಭವಿಷ್ಯದಲ್ಲಿ ಕೂಡ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಇರಾದೆ ಹೊಂದಿದೆ. "ನಮ್ಮೆಲ್ಲರ ಒಗ್ಗಟ್ಟು, ಉತ್ತಮ ಸಮಾಜಕ್ಕಾಗಿ" ಅನ್ನೂ ದ್ಯೇಯವನ್ನು ಸಂಘವು ಆರಂಭದಿಂದಲೂ ಪ್ರತಿಪಾದಿಸುತ್ತ ಬಂದಿದೆ ಮತ್ತೆ ಮುಂದೆಯೂ ಕೂಡ ಇದೇ ಪಥದಲ್ಲೇ ನಡೆಯುವ ವಿಶ್ವಾಸ ಹೊಂದಿದೆ.

ಸಂಘದ ಈ ಎಲ್ಲಾ ಸ್ಪೂರ್ತಿದಾಯಕ ಕಾರ್ಯಗಳು ಬೇರೆ ಬೇರೆ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ತಮ್ಮದೇ ಆದ ಸಂಘಗಳನ್ನು ಕಟ್ಟಿ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಪ್ರೇರೇಪಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸಂಘದ ಉತ್ತಮ ಕೆಲಸಗಳು ತಂದಿರುವ ಬದಲಾವಣೆಗಳ ಪರಿಣಾಮ ಇದು.

ಫಿಲ್ ಹ್ಯುಗಸ್ ನ ನಿಧನದ ಅತ್ಯಂತ ದುರದೃಷ್ಟಕರ ಘಟನೆಯ  ಹಿನ್ನಲೆಯಲ್ಲಿ, ಅವನ ಕುರಿತಾದ ಕೆಲವು ಸಂಗತಿಗಳನ್ನು ಇಲ್ಲಿ ನೆನೆಯಲು ಇಚ್ಚಿಸುತ್ತೆನೆ. ಆಸ್ಟೇಲಿಯಾದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ವ್ಯಕ್ತಿಯೊಬ್ಬನ ಜೀವನದ ಬಹುದೊಡ್ಡ ಸಾಧನೆ ಇದ್ದಂತೆ, ಅಷ್ಟಿದೆ ಅಲ್ಲಿನ ಅಸಂಖ್ಯ ಪ್ರತಿಭಾನ್ವಿತ ಆಟಗಾರರ ನಡುವಿನ ಆರೋಗ್ಯಕರ ಪೈಪೋಟಿ. ಇಂತಹ ಪರಿಸ್ಥಿತಿ ಎಷ್ಟೋ ಬಾರಿ ಆಯ್ಕೆಗಾರರಿಗೆ ತಲೆ ನೋವಾಗಿ ಪರಿಣಮಿಸಿದೆ.  ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಅಲ್ಲಿ ಯಾವುದೇ ಆಟಗಾರ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸುವ ಮುನ್ನ ದೇಶಿಯ ಕ್ರಿಕೆಟಿನಲ್ಲಿ ಸಾಕಷ್ಟು ಅನುಭವ ಹೊಂದಿ ನಂತರ ಅಂತರರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರೆ ಹಿಂದಿರುಗಿ ನೋಡುವುದೇ ಇಲ್ಲ. ನೀವು ಮ್ಯಾಥಿವ್ ಹೇಡನ್, ಆಡಮ್ ಗಿಲ್ ಕ್ರಿಸ್ಟ್, ಡ್ಯಾರೆನ್ ಲೆಹ್ಮನ್, ಮೈಕ್ ಹಸ್ಸಿ ಮತ್ತೆ 90ರ ಉತ್ತರಾರ್ಧದ ನಂತರ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ ಇನ್ನು ಹಲವು ಆಟಗಾರರನ್ನು ಗಮನಿಸಿದರೆ, ಅವರೆಲ್ಲ ತಮ್ಮ 20ರ ವಯಸ್ಸಿನ ಉತ್ತರಾರ್ಧದಲ್ಲೇ ಅಂತರರಾಷ್ಟ್ರಿಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದು. ಆದರೆ ಪಾಂಟಿಂಗ್ , ಕ್ಲಾರ್ಕ್  ರಂತಹ  ಕೆಲವೇ ಕೆಲವು ಅಪ್ರತಿಮ ಪ್ರತಿಭಾನ್ವಿತ ಆಟಗಾರು ಮಾತ್ರ ತಮ್ಮ ಚಿಕ್ಕ ವಯಸ್ಸಿನಲ್ಲೇ ಸ್ತಾನ ಗಿಟ್ಟಿಸಿಕೊಂಡವರು. ದೇಶಿಯ ಕ್ರಿಕೆಟಿನಲ್ಲಿ ಅತ್ಯುತ್ತಮ ಪ್ರದರ್ಶನದ ತರುವಾಯ ತನ್ನ ಇಪ್ಪತರ ಹರೆಯದಲ್ಲೇ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದ ಫಿಲ್ ಕೂಡ ಇದೇ ಸಾಲಿಗೆ ಸೇರುತ್ತಾನೆ.

ತನ್ನ ಇಪ್ಪತ್ತರ ವಯಸ್ಸಿನಲ್ಲಿ ಬಲಿಷ್ಠ ಸೌತ್ ಆಫ್ರಿಕಾ ತಂಡದ ವಿರುದ್ದ 2009 ರಲ್ಲಿ ಪಾದಾರ್ಪಣೆ ಮಾಡಿದ ಫಿಲ್ ಮೊದಲನೇಯ ಇನ್ನಿಂಗ್ಸಿನಲ್ಲಿ ಎದುರಿಸಿದ ನಾಲ್ಕು ಎಸೆತಗಳಲ್ಲಿ ಗಳಿಸಿದ್ದು ಶೂನ್ಯ. ಆದರೆ ಇದೆ ಟೆಸ್ಟ್  ಸರಣಿಯ ಎರಡನೇ ಪಂದ್ಯ ಇತಿಹಾಸದ ಪುಟದಲ್ಲಿ ಅಚ್ಚಳಿಯದಂತೆ ಉಳಿಯುವಂತಹುದು . ಮೊದಲ ಇನ್ನಿಂಗ್ಸ್ ನಲ್ಲಿ, ತೊಂಬತ್ತರ 90ರ ಆಸುಪಾಸಿನಲ್ಲಿದ್ದಾಗ ಎರಡು ಭರ್ಜರಿ ಸಿಕ್ಸರ್ ಗಳನ್ನು ಎತ್ತಿ ಶತಕ ಪೂರೈಸಿದ ಫಿಲ್, ಅದು ಸಾಲದೆಂಬಂತೆ ಎರಡನೇ ಇನ್ನಿಂಗ್ಸ್ ನಲ್ಲಿ ಕೂಡ ಮತ್ತೊಂದು ಶತಕ ದಾಖಲಿಸಿ ಅಂತಿಮವಾಗಿ ಆಸ್ಟ್ರೇಲಿಯಾ ತಂಡಕ್ಕೆ 175 ರನ್ ಗಳ ಜಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ. ಒಂದೇ ಪಂದ್ಯದಲ್ಲಿ ಎರಡು ಶತಕಗಳನ್ನು ದಾಖಲಿಸಿದ ಅತ್ಯಂತ ಕಿರಿಯ ಆಟಗಾರನೆಂಬ ವಿಶ್ವದಾಖಲೆಗೂ ಪಾತ್ರನಾದ. ಇಂತಹ ಒಂದು ಪ್ರತಿಭೆಯನ್ನು ಇಡೀ ಕ್ರಿಕೆಟ್ ಸಮುದಾಯವು "ಈತ ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟ ಸ್ತಾನವನ್ನು ಅಲಂಕರಿಸುತ್ತಾನೆ" ಎಂದು ಹೆಮ್ಮಯಿಂದ ಸ್ವಾಗತಿಸಿತು.

 ಈತನ ಲೆಗ್ ಸೈಡ್ ಕಡೆಗಿನ ಆಟ ಅತ್ಯಂತ ಆಕರ್ಷಕವಾಗಿರುತ್ತಿತ್ತು ಅದರಲ್ಲೂ ಅಪ್ಪರ್ ಕಟ್ ಹಾಗು ಫ್ಲ್ಯಾಷಿ ಕಟ್ ಗಿಲ್ ಕ್ರಿಸ್ಟನ ಆಟ ಹೊಲುವಂತಿತ್ತು. ಈತ ಸ್ಪಿನ್ ಬೌಲಿಂಗ್ ಕೂಡ ತುಂಬಾ ಚೆನ್ನಾಗಿ ಆಡುತ್ತಿದ್ದ. ಮೊದಲು ಆರಂಭಿಕ ಬ್ಯಾಟ್ಸಮನ್ ಆಗಿ ಶುರು ಮಾಡಿ ನಂತರದ ದಿನಗಳಲ್ಲಿ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡಲು ಬರುತ್ತಿದ್ದ. ಮತ್ತೊಂದು ನೆನಪಿನಲ್ಲಿ ಉಳಿಯುವ ಇವನ ಇನ್ನಿಂಗ್ಸ್ ಎಂದರೆ 2013ರ ಇಂಗ್ಲೆಂಡ್ ವಿರುಧ್ಧದ ಅಷೆಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯ. ಆ ಪಂದ್ಯದಲ್ಲಿ, ಆಸ್ಟ್ರೇಲಿಯಾದ ಸ್ಕೋರ್ 117-9 ಇದ್ದಾಗ ಅಂದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ 20ರ ಹರೆಯದ ಆಷ್ಟನ್ ಆಗರ್ ಜೊತೆಗೂಡಿ 10ನೇ ವಿಕೆಟ್ ಗೆ  ಸೇರಿಸಿದ 183 ರನ್ ಗಳಲ್ಲಿ, ಆಷ್ಟನ್ ಆಗರ್ 98 ಹಾಗು ಫಿಲ್ 81* ನೆನಪಿನ್ನಳುಯುವಂತದ್ದು. ಆಸ್ಟ್ರೇಲಿಯಾ ಈ ಪಂದ್ಯ ಸೋತರೂ ಕೂಡ, ಈ ಅದ್ಬುತ ಇನ್ನಿಂಗ್ಸ್ ನ ಮೂಲಕ ಫಿಲ್ ಎಲ್ಲರ ಹೃದಯ ಗೆದ್ದನು.

ಇವನ ಸಾವಿನ ಸುದ್ದಿ ಕೇಳಿ, ಇವನನ್ನು ಒಬ್ಬ ಆಸ್ಟ್ರೇಲಿಯನ್ ಆಗಿ ನೋಡದೆಯೆ ನಮ್ಮಲ್ಲೇ ಒಬ್ಬ ಕ್ರೀಡಾಪಟು ನಮ್ಮನಗಲಿದ ಭಾವದಿಂದ ನೋಡಲಾಗುತ್ತಿದೆ. ಒಬ್ಬ ಆಸ್ಟ್ರೇಲಿಯನ್ ಆಗಿರಲಿ ಅಥವ ಶ್ರೀಲಂಕನ್ ಆಗಿರಲಿ ಅಥವ ಪಾಕಿಸ್ತಾನಿ ಅಥವ ಬೇರೆ ಯಾರೇ ಆಗಿರಲಿ, ಇಂತಹ ಅಕಾಲಿಕ ದುರ್ಘಟನೆ ಸಂಭವಿಸಿದಾಗ ನಮ್ಮೆಲ್ಲರ ಹೃದಯ ತುಂಬಿ ಬರುತ್ತದೆ. ಇವನು ಅಗಲಿದಾಗ ಇಡೀ ಕ್ರಿಕೆಟ್ ಸಮುದಾಯವೇ ದುಃಖದ ಮಾಡುವಲ್ಲಿ ಮುಳುಗಿದ್ದೆ ಇದಕ್ಕೆ ಸಾಕ್ಷಿ. ಪ್ರತಿಯೊಬ್ಬ ಕ್ರಿಕೆಟಿಗನೂ ಮೈದಾನದಲ್ಲಿ, ಮೈದಾನದ ಹೊರಗೂ ಗೌರವ ಸೂಚಿಸಿದ. ಬಹುಷಃ ಇಂತಹ ಸಂಗತಿಗಳೇ ಎಲ್ಲಾ ಕ್ರಿಕೆಟಿಗರನ್ನು ಒಗ್ಗೂಡಿಸೋದು, ಎಲ್ಲಾ ಕ್ರಿಕೆಟ್ ದೇಶಗಳನ್ನೂ ಒಗ್ಗೂಡಿಸೋದು ಮತ್ತೆ ನಾವೆಲ್ಲಾ ಒಗ್ಗೋಡಿ ತುಂಬಲಾರದ ನಷ್ಟದ  ಪಾಲುದಾರರಾಗೋದು.

ಕೊನೆಯದಾಗಿ, ಈ ಬಾರಿಯ "ಫಿಲ್ ಹ್ಯೂಸ್ ಸ್ಮರಣಾರ್ಥ" ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಲಿ ಹಾಗೂ ಇಷ್ಟು ವರ್ಷ ಸಂಘಕ್ಕೆ ಸಿಕ್ಕಿರುವ ಸಹಯೋಗ ಇನ್ನು ಮುಂದೆಯೂ ಸಿಗಲಿ ಎಂದು ಆಶಿಸೋಣ.

ಶಶಿ ಕಿರಣ್ ಎಸ್. ಎಸ್. 

4 comments:

amshuman said...

ಹೆಂಗೋ ಇಷ್ಟು ಬರೀತಿಯಾ. . . ಚೆನ್ನಾಗಿದೆ, ವಿಷಯ ಬರವಣಿಗೆ ಎರ್ಡೂ. . . ಹಳೇ ವಿದ್ಯಾರ್ಥಿಗಳ ಸಂಘದ ಕೆಲಸ ಷ್ಲಾಘನೀಯ. . ಇನ್ನೂ ಹೆಚ್ಚಿನ ಪ್ರೋತ್ಸಾಹ/ಯಶಸ್ಸು ಅವರದಾಗಲಿ
-ಅಂಶು

Unknown said...

ನೀವು ಹೀಗೆಯೇ ಬರೆಯುವ ಅಭ್ಯಾಸ ಮುಂದುವರೆಸಿ ನಿಮಗೆ ಒಳ್ಳೆಯ ಭವಿಷ್ಯ ಇದೆ.

Sachin Tiptur said...

ಮಗ ಚೆನ್ನಾಗಿ ಬರೆದಿದ್ದೀಯ...

Shashi Kiran S S said...

ತುಂಬಾ ಧನ್ಯವಾದಗಳು...