ತೇಜಸ್ವಿಯವರ ಅದ್ಭುತ ಸಾಹಿತ್ಯ ಕಲಾಸೃಷ್ಟಿ ಹಾಗು ಗ್ರಾಮೀಣ ಬದುಕಿನ ಕಥೆಗಳನ್ನು ಸಾರುವ ಎಸ್. ಎಲ್. ಭೈರಪ್ಪನವರ "ಗೃಹಭಂಗ", "ಸಾಕ್ಷಿ", "ತಬಲ್ಲಿ ನೀನಾದೆ ಮಗನೆ", "ದಾಟು" ಮತ್ತಿನಿತರ ಕಾದಂಬರಿಗಳಿಂದ ಸ್ಪೂರ್ತಿ ಪಡೆದು ಬರೆಯುವುದಕ್ಕೆ ಮಾಡಿರುವ ಒಂದು ಸಣ್ಣ ಪ್ರಯತ್ನ. ಇದೊಂದು ಕಥೆಯಲ್ಲ, ಯಾವುದೇ ಕಥವಸ್ತುವನ್ನು ಒಳಗೊಂಡಿಲ್ಲ, ಹಳ್ಳಿ ಚಿತ್ರಗಳನ್ನು ತೋರಿಸುವ ಒಂದು ಪ್ರಯತ್ನ ಅಷ್ಟೆ. ಎಲ್ಲ ಪಾತ್ರಗಳು ಮತ್ತು ಕಥೆಗಳು ಕೇವಲ ಕಾಲ್ಪನಿಕ, ಕೆಲವು ಊರಿನ ಹೆಸರುಗಳು, ವ್ಯಕ್ತಿಗಳ ಹೆಸರುಗಳನ್ನು ಸ್ವಾಭಾವಿಕವಾಗಿರಲೆಂದು ಗೊತ್ತಿರುವ ಕೆಲವು ಊರುಗಳ ಮತ್ತು ವ್ಯಕ್ತಿಗಳ ಹೆಸರುಗಳನ್ನು ಬಳಸಲಾಗಿದೆ. ತಿಪಟೂರಲ್ಲಿ ಹುಟ್ಟಿ ಸುತ್ತಮುತ್ತಲ ಹಳ್ಳಿಗಳನ್ನು ನಾನು ನೋಡುತ್ತಾ ಬೆಳೆದ ಕಾರಣದಿಂದ ಈ ಸೀಮೆಯನ್ನೆ ಹಾರಿಸಿದ್ದೆನೆ. ಕೆಲವು ಬೈಗಳುಗಳನ್ನು ಕೂಡ ಸ್ವಭಾವಿಕವಾಗಿರಲೆಂದು ಹಳ್ಳಿ ಭಾಷೆಯನ್ನು ಯೆತೆಚ್ಹವಾಗಿ ಉಪಯೊಗಿಸಿದ್ದೆನೆ.ತಪ್ಪಿರುವುದು ಸಹಜ, ಇದ್ದರೆ ಕ್ಷಮಿಸಬೇಕು :-) - ಶಶಿಕಿರಣ್ ಎಸ್ ಎಸ್
ಶಿವಪುರ, ತುಮಕೂರು ಜಿಲ್ಲೆ, ತಿಪಟೂರು ತಾಲೂಕು, ನೊಣವಿನಕೆರೆ ಹೋಬಳಿಯಲ್ಲಿ ಬರುವ ಒಂದು ದೊಡ್ಡ ಗ್ರಾಮ. ಈ ಊರಲ್ಲಿ ಬ್ರಾಹ್ಮಣ, ಒಕ್ಕಲಿಗ, ಲಿಂಗಾಯತ, ಕುರುಬ, ಕುಂಬಾರ, ಹರಿಜನ, ಗಿರಿಜನ, ಮುಸಲ್ಮಾನ, ಒಂದ್ದಿಬ್ಬರು ಕ್ರಿಸ್ತರು ಈಗೆ ಎಲ್ಲಾ ಮತಸ್ತರು ಸಹಬಾಳ್ವೆಯಿಂದ ಜೀವನ ನೆಡೆಸುತಿದ್ದ ಒಂದು ಸುಂದರ ಗ್ರಾಮ. ಹಳ್ಳಿ ಅಂದಮೆಲೆ ಸಣ್ಣ ಪುಟ್ಟ ಹಗೆ-ದ್ವೇಷಗಳು ಇದ್ದೆ ಇದ್ದವು ಅಂತ ಬೇರೆ ಹೇಳಬೇಕಿಲ್ಲ. ಇಲ್ಲಿನ ಜೀವನ ಶೈಲಿಯು ಸ್ವತಂತ್ರಪೂರ್ವ ಮತ್ತು ನಂತರದ ದಿನಗಳುವು, ಅಂದರೆ ಸರಿ ಸುಮಾರು 1935-1940ರ ನಂತರ ಕಂಡುಬರುವ ಅಥವಾ ನೆಡೆದಿರಬಹುದಾದ ಸಂಗತಿಗಳು.
ಇದು ಒಂದು 500 ಮನೆ ಗ್ರಾಮ ಅಂದರೆ ಆಗಿನ ಕಾಲಕ್ಕೆ ಒಂದು ದೊಡ್ಡ ಗ್ರಾಮೆವೇ ಸರಿ, ಪ್ರಮುಖವಾಗಿ ರೈತಾಪಿ ಜನಸಂಖ್ಯೆಯನ್ನೆ ಒಳಗೊಂಡ ಒಂದು ಸುಭೀಕ್ಷ ಗ್ರಾಮವೆಂದರೆ ತಪ್ಪಾಗಲಾರದು. ಎಲ್ಲಾ ರೀತಿಯ ಮಳೆಗಾಲ, ನೆರೆ, ಬರಗಾಲ, ಸುಖ-ದುಖಃ, ಕ್ಷಾಮ, ಶಾಂತಿ-ನೆಮ್ಮದಿಯಿಂದ ಕೂಡಿದ ಹತ್ತಾರು ತಲೆಮಾರುಗಳನ್ನು ಕಂಡಿರುವ ಒಂದು ಊರು.
ಊರಿನ ಉದ್ದಕ್ಕೂ ಹರಡಿಕೊಂಡಿರುವ ಕೆರೆ, ಕೆರೆಯ ಆಚೆಯ ದಡಕ್ಕೆ ಉದ್ದಕ್ಕೂ ಸಾಗಿರುವ ಕೆರೆಯ ಏರಿ ಕೋಡಿಯೊಂದಿಗೆ ಕೊನೆಗೊಳ್ಳುತ್ತದೆ, ಕೆರೆಯ ಹಿಂದೆ ಶಿವಪುರದ ಜನರದೆ ತೆಂಗಿನ ತೊಟಗಳು ಮತ್ತೆ ಬತ್ತ-ಕಬ್ಬು ಬೆಳೆಯುವ ಗದ್ದೆಗಳು. ಅದರಾಚೆಗೆ ಮಲ್ಲಸಂದ್ರ, ಬೋಚಿಹಳ್ಳಿಯೆನ್ನುವ ಗ್ರಾಮಗಳು. ಊರ ಮುಂದೆ ಪೂರ್ವಾಭಿಮುಖವಾಗಿ ಹಾಗು ಕೆರೆಗೆ ಎದಿರುಗೊಳ್ಳುತ್ತಾ ಗ್ರಾಮದೇವತೆಯಾದ ಕೆಂಪಮ್ಮ ದೇವರ ಗುಡಿ, ಗುಡಿಯಮುಂದೆ ಒಂದು ದೊಡ್ಡ ಆಲದ ಮರದ ಒಂದು ಹಳ್ಳಿಕಟ್ಟೆ ಕೆರೆಗೆ ಹೊಂದಿಕೊಂಡಂತೆ. ಇದೇ ಊರಿನ ಜನರ ಮಾತಿನ ತೀಟೆ ತೀರಿಸಿಕೊಳ್ಳುವ ವೇದಿಕೆ, ನ್ಯಾಯ ಸ್ಥಾನ, ಮಕ್ಕಳ ಕಣ್ಣಾಮುಚ್ಹಾಲೆಯಾಡುವ ಜಾಗ ಹಾಗು ಮಲಗಿ ನಿದ್ರೆ ಮಾಡುವವರಿಗೆ ನೆಮ್ಮದಿಯ ತಾಣ. ಹೀಗೆ ಹಲವು ರೀತಿಯ ಉಪಯೊಗಿ ಕಟ್ಟೆ. ಹಳ್ಳಿಕಟ್ಟೆಯ ಬಲಕ್ಕೆ ತೇರಿನ ಮನೆ, ಗ್ರಾಮ ದೇವತೆ ಕೆಂಪಮ್ಮನ ಜಾತ್ರೆಯಲ್ಲಿ ತೊಳೆದು ಅಲಂಕರಿಸಿ ಅಮ್ಮನ ಮೆರವಣಿಗೆಗೆ ಅಣಿ ಮಾಡಿ ಸುತ್ತೂರ ಜನರೆಲ್ಲ ಪೂಜೆ ಮಾಡಿಸಿ ತೇರೆಳೆದು ಬಾಳೆಹಣ್ಣು ಹೊಡೆದು ಅಂಬು ಆರಿಸಿ ಜಾತ್ರೆ ಕೊನೆಗೊಂಡಮೇಲೆ ಮುಂದಿನ ಜಾತ್ರೆಯವರೆಗೆ ವಿಶ್ರಮಿಸುವ ತೇರಿನ ಸ್ಥಳ. ಇದು ತುಂಬ ದೊಡ್ಡ ತೇರೇನಲ್ಲ, ಇದ್ದಿದ್ದರಲ್ಲೆ ಚಿಕ್ಕದಾಗಿ ಚೊಕ್ಕವಾಗಿ ಪೂರ್ತಿ ಕಪ್ಪು ಮರದಿಂದ ತಯಾರಿಸಿರುವಂತದ್ದು, ಒಳಗಿಂದ ಮತ್ತು ಹೊರಗಿಂದ ಮರದ ಹಲಗೆಗಳಿಂದ ಕೂಡಿಸಿ ಚೌಕಾಕಾರದಲ್ಲಿ ನಾಲ್ಕು ಮೂಲೆಗಳು ಬರುವಂತೆ ಮಾಡಲಾಗಿದೆ, ಹೊರಗಿನ ಮೈಯನ್ನು ಬಳ್ಳೀ ತಿರುವುಗಳನ್ನು ಒಳಗೊಂಡ ಚಿತ್ತಾರಗಳಿಂದ ಕೆತ್ತಲಾಗಿದೆ. ಅದರ ಮೇಲೆ ದೇವರನ್ನು ಕೂರಿಸುವ ಜಾಗ, ಆ ಜಾಗವನ್ನು ರಕ್ಷಿಸಲ್ಲೆನ್ನುವಂತೆ ನಾಲ್ಕು ಮೂಲೆಗೂ ಮರದ ಕಂಬಗಳು, ಅವುಗಳ ಆಧಾರದ ಮೆಲೆ ಒಂದು ಸುಂದರ ಗೋಪುರ. ಊರಿನ ಮಕ್ಕಳು ಸಂಜೆ ಹೊತ್ತಿನಲ್ಲಿ ಕಣ್ಣಮುಚ್ಚಾಲೆ ಆಡುವಾಗ ಇಲ್ಲಿ ಬಂದು ಅವಿತುಕೊಳ್ಳುವುದು ಉಂಟು. ಆಮ್ಮನ ಗುಡಿಯ ಎಡಭಾಗದ ಕೊನೆಯ ಮುಂಭಾಗಕ್ಕೆ ದಕ್ಷಿಣಾಭಿಮುಖವಾಗಿ ಎಲ್ಲಾ ಹಳ್ಳಿಗಳ ಪ್ರತೀತಿಯಂತೆ ಆಂಜುನೆಯಸ್ವಾಮಿ ಗುಡಿ ಇದೆ. ಈ ಗುಡಿಯ ಎಡಭಾಗಕ್ಕೆ ಕೆರೆಯ ಉದ್ದಕ್ಕೂ ಓಡುವ ರಸ್ತೆ, ಹಾಗೆ ಸಾಗಿದರೆ ಊರು ದಾಟಿ ಕುರುಬರಹಳ್ಳಿ, ಲಿಂಗದಳ್ಳಿಗೆ ಹೋಗುವ ಮಾರ್ಗ ಹಿಡಿಯಬಹುದು. ಊರ ಆಚೆಗೆ ಕೆರೆಯ ದಡದಲ್ಲಿ ಈಶ್ವರಸ್ವಾಮಿಯ ಗುಡಿ ಮತ್ತು ಅದರ ಮುಂದ್ದೊಂದ್ದು ಕಲ್ಲು ಬಸವಣ್ಣನ ವಿಗ್ರಹ, ಪಕ್ಕದಲ್ಲೆ ಒಂದು ಬಿಲ್ವಪತ್ರೆ ಮರ ಇದೆ ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಲ್ಲೆ ಪಕ್ಕದಲ್ಲಿ ಒಂದು ಸಣ್ಣ ಸಿಹಿ ನೀರನ ಕಲ್ಯಾಣಿ, ಊರಿನ ಉತ್ತರ ಭಾಗದ ಕೇರಿಯ ಸವರ್ಣಿಯರು ಇಲ್ಲಿಂದಲೆ ಮನೆಗೆ ಕುಡಿಯುವ ನೀರನ್ನು ಕೊಂಡೊಯುತ್ತಾರೆ. ಅದರ ಮುಂದೆ ಒಂದು ದೊಡ್ಡ ವಂಗೆ, ಬೇವು, ಇನ್ನಿತರ ಬೃಹದ್ದಾಕಾರದ ಮರಗಳಿಂದ ಆವರಿಸಲ್ಪಟ್ಟ ತೋಪು. ಅದೆ ಸುತ್ತು ಹತ್ತಾರು ಹಳ್ಳಿ ಸೇರುವ ಪ್ರತೀ ಬುಧುವಾರ ನೆಡೆಯುವ ಸಂತೆ ಮಾಳ.
ಶ್ಯಾನುಭೋಗ ಶಂಕರಣ್ಣನವರು ಊರಿಗೆ ಆ ಕಾಲಕ್ಕೆ ವಿಧ್ವಾನ್ ವ್ಯಕ್ತಿ, ನೋಡಲು ಎತ್ತರವಾದ ಮೈತುಂಬಿದ ಆಳು. ಮೆಟ್ರಿಕ್ ತನಕ ಓದಿ ಪಾಸಗಿದ್ದವರು. ಸರ್ಕಾರಿ ಕೆಲಸ ಸಿಗುವ ಅವಕಾಶವಿದ್ದರು ಶ್ಯಾನುಭೋಗ ಶಾಮಣ್ಣನವರ ಒಬ್ಬರೆ ಮಗನಾದ್ದರಿಂದ ಅವರ ಮರಣಾನಂತರ ಅವರ ಉತ್ತರಾಧಿಕಾರಿಯಿಲ್ಲದ ಕಾರಣ ಪಾರಂಪರಿಯವಾಗಿ ಬಂದ ವೃತ್ತಿಯನ್ನು ಬಿಡಲು ಅವರಿಗೆ ಇಷ್ಟ ಇರಲಿಲ್ಲ. ಮತ್ತು ಊಳಲು-ಬೆಳೆಯಲು ಧಿಮ್ಮಗೆ 8 ಎಕ್ಕರೆ ಹೊಲ, 10 ಎಕ್ಕರೆ ಕೆರೆ ಹಿಂಬದಿಯ ಆಬಾದಿನ ಗದ್ದೆ, 300 ಗಿಡಗಳ ತೆಂಗಿನ ತೋಟ ಇದ್ದಿದ್ದರಿಂದ ಅವರು ಶಿವಪುರದಲ್ಲೆ ಸುತ್ತು 10-15 ಹಳ್ಳಿಯ ಕಂದಾಯ ವಸೂಲಿ, ಕಾತೆ-ಪಾಣಿ ಬರೆಯುತ್ತ ಮತ್ತು ಸಂಬಂದ್ಧಪಟ್ಟ ಕೆಲಸಗಳನ್ನು ನೋಡಿಕೊಳುತ್ತ ನೆಮ್ಮದಿಯಿಂದ ಇರುವ ಸಮಾಧಾನಕ್ಕೆ ಶರಣಾಗಿದ್ದರು ಜೊತೆಗೆ ರೈತರಿಂದ ಕಾಯಿ, ರಾಗಿ, ಬತ್ತ, ಬೇಳೆ-ಕಾಳುಗಳು ಶಾನುಭೋಗರೆನ್ನುವ ಗೌರವಕ್ಕೆ ಕಂದಾಯ ರಶೀದಿ ಬರೆಯುವ ಸಮಯದಲ್ಲಿ ಮತ್ತೆ ಸುಗ್ಗಿಯ ಕಾಲದಲ್ಲಿ ಕಾಣಿಕೆಯಾಗಿ ಇವರ ಮನೆಗೆ ಬಂದು ಸೇರುತ್ತಿದ್ದವು. ತಾಯಿ, ಪತ್ನಿ, ಊರಿನ ಶಾಲೆಯಲ್ಲೆ ಓದುತಿದ್ದ ಒಬ್ಬ ಮಗ ಮತ್ತೆ ಒಬ್ಬಳು ಮಗಳಿಂದ ಕೂಡಿದ ತುಂಬಿದ ಕುಟುಂಬ. ಊರಿನ ಇವರ ಆಪ್ತವಲಯದಲ್ಲಿ ಮುಖ್ಯವಾಗಿ ಇದ್ದವರು ಪಟೇಲ್ ದುಂಡೇಗೌಡ್ರು, ದಿಣ್ಣೆಮನೆ ಶಿವಪ್ಪನವರು, ಗುಡಿಗೌಡರಾದ ಹೊನ್ನಪ್ಪ.
ಪಟೇಲ್ ದುಂಡೇಗೌಡ್ರು ಊರಿನ ನ್ಯಾಯ ತೀರ್ಮಾನ, ಜೊತೆಗೆ ಶ್ಯಾನುಭೋಗರ ಕಂದಾಯ ವಸುಲಿ ಸಮಯದಲ್ಲಿ ಸಹಾಯ ಮತ್ತಿನಿತರ ಗ್ರಾಮಕ್ಕೆ ಸಂಬಂಧಪಟ್ಟ ಕೆಲಸದ ಮೇಲ್ವಿಚಾರಣೆಯಲ್ಲಿ ಯಾವತ್ತು ಕೂಡ ಮುಂದು, ಊರಿನ ಹಿರಿಯರು ಕೂಡ. ಭಾರಿ ಕುಳ ಅನ್ನುವುದರಲ್ಲಿ ಸಂದೆಹವಿಲ್ಲ, 1000ಕ್ಕು ಮಿಕ್ಕಿದ ತೆಂಗಿನ ತೋಟ, ಬತ್ತ ಕಬ್ಬು ಬೆಳೆಯಲು 50 ಎಕ್ಕರೆ ಗದ್ದೆ, 60 ಎಕ್ಕರೆ ಹೊಲ, ಕಬ್ಬರೆಯಲು ಕೆರೆಯ ಹಿಂದಿನ ತಮ್ಮ ಸ್ವಂತದ್ದೆ ಆಲೆ ಮನೆ. 70-80 ಚದರದ ಒಂದು ಭವ್ಯವಾದ ಮನೆ, ಅಷ್ಟೆ ವಿಸ್ತಾರವಾದ ಮನೆ ಸುತ್ತಲ ಪ್ರಾಂಗಣ. ತಕ್ಕಮಟ್ಟಿಗೆ ಧಾನಧರ್ಮ ಮಾಡಿಕೊಂಡು ಬಂದ ಮನೆತನ.
ದಿಣ್ಣೆಮನೆ ಶಿವಪ್ಪನವರು, ಇವರ ಮನೆ ಊರಿನ ಏತ್ತರದಲ್ಲಿ ಇದ್ದಿದ್ರಿಂದ ಇವರ ಮನೆಯವರನ್ನು ದಿಣ್ಣೆಮನೆ ಮನೆಯವರು ಅಂತ ಕರೆಯುವ ವಾಡಿಕೆಯಾಗಿತ್ತು ಹಾಗೆ ಇವರನ್ನು ದಿಣ್ಣೆಮನೆ ಶಿವಪ್ಪ ಅಂತನೆ ಕರಿಯೊವ್ರು, ಇವರ ಮನೆಯ ಇತರರನ್ನು ಕೂಡ "ದಿಣ್ಣೆಮನೆ ಕಲ್ಲೆಶ", "ದಿಣ್ಣೆಮನೆ ಗಂಗಣ್ಣ" ಅಂತ ಕರಿತಿದ್ರು. ಕಲ್ಲೇಶ, ಗಂಗಣ್ಣ ಶಿವಪ್ಪನವರ ಮಕ್ಕಳು. ಪಿತ್ರಾರ್ಜಿತವಾಗಿ ಬಂದಿದ್ದ, ಪಟೇಲ್ ದುಂಡೆಗೌಡರ ಸಮಕ್ಕು ಇರುವ, ಜಮೀನಿನ ವಾರುಸ್ದಾರರು ಕೂಡ. ಇದೇ ರೀತಿಯಲ್ಲಿ, ಕೊನೆಮನೆ ಕಲ್ಲಪ್ಪ, ಮೇಗಲುಮನೆ ಚಿಕ್ಕಲಿಂಗಣ್ಣ, ಹಣ್ಣಿನಮನೆ ಶಿವಬಸಪ್ಪ, ಬೀದಿಮನೆ ತಿಮ್ಮೇಗೌಡ್ರು ಅಂತ ಒಂದಲ್ಲ ಒಂದು ಕಾರಣದಿಂದ ಪ್ರತಿಮನೆಯವರನ್ನು ಒಂದಲ್ಲ ಒಂದು ಹೆಸರಿಂದ ಸಂಬೋದಿಸುವುದು ಈ ಗ್ರಾಮದಲ್ಲಿ ಕಂಡುಬರುವ ಒಂದು ಅಂಶ.
ಗುಡಿಗೌಡ ಹೊನ್ನಪ್ಪನವರು ಊರಿನ ಕೆಂಪಮ್ಮ ದೇವಸ್ತಾನದ ಮೇಲ್ವಿಚಾರಣೆ ನೋಡಿಕೊಳ್ಳುತಿರುವವರು, ಪಾರಂಪರಿಯವಾಗಿ ಬಂದಿರುವ ಅಧಿಕಾರ. ಇವರ ಮನೆಯವರನ್ನು ದಿಣ್ಣೇಮನೆ ಮನೆಯವ್ರು ಅನ್ನೊ ಹಾಗೆ ಗುಡಿಗೌಡ್ರು ಮನೆಯವ್ರು ಅಂತ ಕರಿತಿದ್ದ ಪ್ರತೀತಿ ಇತ್ತು. ಜಾತ್ರೆ, ಅಮ್ಮನ ಉತ್ಸವದ ಸಮಯದ ಹೊರೆತು ಇನ್ನಿತರ ದಿನಗಳಲ್ಲಿ ಅಮ್ಮನ ಒಡವೆ, ದೇವಸ್ಥಾನದ ಅಮುಲ್ಯವಾದ ಪಾತ್ರೆ ಪಗಡೆಗಳು ಇವರ ಮನೆಯಲ್ಲಿದ್ದ ದೇವಸ್ಥಾನಕ್ಕೆ ಸೇರಿದ್ದ ಕಬ್ಬಿಣ್ಣದ ಕಜಾನೆಯಲ್ಲಿ ಇರುತ್ತಿದವು.
ಹಳ್ಳಿಯ ವಿವರಣೆ ಇಷ್ಟು ಸಾಕು, ಮತ್ತಷ್ಟು ವ್ಯಕ್ತಿಗಳ ಮತ್ತು ಊರಿನ ವಿವರಗಳನ್ನು ಸಾಂಧರ್ಭಿಕ ಅವಶ್ಯಕತೆಗೆ ತಕಂತ್ತೆ ವಿವರಿಸುತ್ತ ಹೋಗುತ್ತೆನೆ.
ಸಂಜೆ 4 ಗಂಟೆ ಸುಮಾರಿಗೆ ಪಟೇಲ್ ದುಂಡೆಗೌಡ್ರು, ದಿಣ್ಣೆಮನೆ ಶಿವಪ್ಪನವರು, ಗುಡಿಗೌಡ್ರ ಹೊನ್ನಪ್ಪ ಮತ್ತೆ ಶಾನುಭೋಗ್ ಶಂಕರಣ್ಣನವರು ಊರ ಮುಂದಿನ ಕಟ್ಟೆಯ ಮೇಲೆ ದೇಶಾವಾರಿ ಮಾತನಡುತ್ತ ಕುಳಿತಿರಲು ಶಾನುಭೋಗರು ಮಾತು ತೆಗೆದರು
"ಪಟೇಲ್ರೆ, ಹೊಸ ವಿಸ್ಯ ಗೊತ್ತ ನಿಮ್ಗೆ?"
"ಎನ್ ಶಾನ್ಬೊಗಪ್ಪ ಅದು, ನೀ ಹೇಳಿದ್ರೆ ತಿಳಿತೈತಪ್ಪ" ಅಂತ ಪಟೇಲರೆನ್ನಲು.
"ಈಟ್ ದಿನುತಂಕ್ಕ ಸರ್ಕಾರ್ದೊರು ಬರೀ ಜಮಿನೀನ ಮೆಲೆ ಕಂದಾಯ ವಸುಲಿ ಮಾಡ್ತಿದ್ರು, ನಾವು ಎಷ್ಟು ಬೆಳ್ಕಂಡ್ರು ಯಾರು ಏನು ಕೇಳ್ತಿರ್ಲಿಲ್ಲ. ಇನ್ಮೆಲೆ ನಾವು ಬೆಳೆಯೊ ಬೆಳೆನುವೆ ಅಂದಾಜು ಮಾಡಿ ಅದುಕ್ಕು ಕಂದಾಯ ಕಟ್ಟಬೇಕಂತೆ, ಹೋದ್ ಸೋಮವಾರ ತಿಪಟೂರ್ಗೆ ಹೋಗಿದ್ನಲ್ಲ ಕೊಬ್ರಿ ಹಾಕ್ಯಂಡು, ಅವಗ ನೊಣವಿನಕೆರೆ ಶೇಕ್ದಾರರು ಮತ್ತೆ ನಾನುವೆ ತಾಶಿಲ್ದಾರುನ ಕಾಣವ ಅಂತ ಹೊಗಿದ್ವು ಈ ವರ್ಷದ ಕಂದಾಯದ ಲೆಕ್ಕ-ಬಾಬಯ್ತು ಕೊಟ್ಟುಬರೊಣ ಅಂತ, ಆವಗ ಈ ಹೊಸ ರೂಲ್ಸ್ನ ಮೈಸೊರು ಸರ್ಕಾರದವ್ರು ಮಾಡವ್ರೆ ಈ ವರ್ಷದಿಂದಲೆ ಜಾರಿ ಅಂತವ ಹೇಳಿದ್ರು. ಇಗಳಿ ಅದ್ರ ಪತ್ರವ, ೧೦ ಪಲ್ಲ ರಾಗಿಗೆ 12 ಆಣೆ ಕಂದಾಯ, 10 ಪಲ್ಲ ಬತ್ತುಕ್ಕೆ 16 ಆಣೆ, ಹಿಂಗೆಯ ತೆಂಗು, ಕಬ್ಬು ಎಲ್ಲದುಕ್ಕುವೆ ಅಂದಾಜು ಮಾಡಿ ವಸುಲಿ ಮಾಡ್ಬೇಕು ಇನ್ಮೆಲೆ, ಗೋಮಳುಕ್ಕಾದ್ರೆ ಏನು ಇಲ್ಲ" ಅಂತ ಶಾನುಭೋಗರು ಸೂಚನಾಪತ್ರವನ್ನು ಕೈಯಲ್ಲಿ ಹಿಡಿದು ಒಂದೆರಡು ಹೊಸ ನಿಯಮಗಳನ್ನು ಓದಿ ಹೇಳಿದರು.
"ಈಗೊಳ್ಳೆ ಪಜೀತಿ ಬಂತ್ತಲ ಶಾನ್ಬೋಗಪ್ಪ, ಅದ್ಯಾಕ್ ಇದ್ಕಿದ್ದಂಗೆ ಈ ಹೊಸ ರುಲೀಸ್ನ ಮಡ್ಗವ್ರೆ ಸರ್ಕಾರದವ್ರು?" ಗುಡಿಗೌಡ್ರ ಹೊನ್ನಪ್ಪ ಮಾತು ತೆಗೆದ್ರು ದಿಗುಲು ಗೊಂಡವರಂತೆ.
"ನಂಗು ಮೊದ್ಲು ಗೊತ್ತಗ್ಲಿಲ್ಲ, ಅಮೇಲೆ ಅಲ್ಲಿಗೆ ಬಂದ ಲಾಯೆರ್ ಶಂಕರಲಿಂಗಪ್ಪನವ್ರು ಹೇಳಿದ್ರು ಅದೆನೋ ಯುರೋಪ್ನಾಗೆ ಯುದ್ಧ ನೆಡಿತ ಅದೆ ಅಂತೆ, ಅದುಕ್ಕೆ ನಮ್ಮ ಹಿಂದುಸ್ಥಾನನ ಆಳುತ್ತ ಅವ್ರಲ್ಲ ಇಂಗ್ಲಿಷ್ನೊವ್ರು, ಮೈಸೂರು ಸರ್ಕಾರದ ಮುಖೇನ ಚಂದ ವಸೂಲಿ ಮಾಡ್ತಾವ್ರಂತೆ ಯುದ್ಧದ ಕರ್ಚಿಗೆ ಅಂತ ಹೇಳ್ತಿದ್ರು, ಇದ್ರು ಇರಬೈದು ಅಂತ ನಾನ್ ಬಂದೆ"
"ಎಲಾ ಕದಿಮ್ನನ್ಮಕ್ಳನ್ ತಗಂಬಂದು, ಈ ಇಂಗ್ಲೀಷ್ನೊವ್ರಿಗೆ ತಿನ್ನಕ್ಕೆ ಕಂಡೊರ್ ಮನೆ ಗಂಟೇ ಬೇಕ?, ನಾವು ಕಷ್ಟ ಪಟ್ಟು ಹಗಲು-ರಾತ್ರಿ ಗೇಯಿಮೆ ಮಾಡಿ ದುಡಿಯೋದು ಅಮೆಲೆ ಇವ್ರು ಬೂಟು ಪ್ಯಾಂಟು ಹಾಕ್ಯಂಡು ಲಲ್ಲೆ ಒಡ್ಕಂಡು ಯುದ್ಧ ಮಾಡಕ್ಕೆ ನಾವು ದುಡ್ಡು ಕೊಡೋದು, ನೊಡ್ರಪ್ಪ ಎಂಗೈತೆ ಈ ಇಂಗ್ಲೀಷ್ ಮುಂಡೆಗಂಡ್ರ ಯೊಗ್ತಿ? ಈ ಕಳ್ನನ್ ಮಕ್ಳು ಗೆದ್ದಾರ ಗೆಲ್ಲಲಿ, ಸೊತಾರ ಸೋಲಲಿ ನಮ್ಗೇನು ನಯಾಪೈಸದ್ ಉಪ್ಯೋಗ ಇಲ್ಲ, ಶೊಕೀಲಾಲ್ ನನ್ಮಕ್ಳುನ್ನ ಎಕ್ಕಡದಾಗೆ ಹೊಡೆದು ಹೊಡುಸ್ಬೆಕು ಇವರ ಜನ್ಮಕ್ಕೆ ಇಷ್ಟು ಬೆಂಕಿ ಹಾಕ" ಅಂತ ದಿಣ್ಣೆಮನೆ ಶಿವಪ್ಪನವರು ಒಂದೆರಡು ರೋಷದ ನುಡಿಗಳನ್ನು ತಮಗೆ ತೊಚಿದಂತೆ ಆಡಿದರು.
"ಆದುಕ್ಕೆ ಅಲುವ್ರೆ, ಗಾಂಧೀಜಿ ಜೊತೆ ಲಕ್ಷಾಂತರ ಜನ ದೇಶದಲೆಲ್ಲೆ ಹೊರಟ ಮಾಡ್ತಿರದು? ಭಾರತ ಬಿಟ್ಟು ತೊಲಗಿ ಅಂತವ. ತಿಪ್ಟುರಿಗೆ ಹೋದಾಗ ಕೊಲ್ಟ್ ತಾವ ಪೇಪರ್ ನಾಗೆ ಓದಿದ್ದೆ, ಬ್ರಿಟೀಶ್ ಪೋಲಿಸ್ನವ್ರು ನಮ್ಮೋರ್ನೆಲ್ಲ ಜೈಲ್ ಹಾಕ್ತಾವ್ರಂತೆ" ಶಾನಭೋಗರು ದೇಶದ ವಿದ್ಯಾಮನಗಳ ಬಗ್ಗೆ ಒಂದೆರಡು ಮಾತು ಹೇಳಿದ್ರು.
"ಇವಜ್ಜ ಮಾಡ್ತಿರೋದು ನ್ಯಾಯ ಶಾನ್ಬೋಗ್ರೆ, ನಾನು ಪಪೆರ್ ನಾಗೆ ಈ ವಯ್ಯನ ಪಟ ನೋಡಿದ್ದೆ ನಮ್ಮ ಕೊಪ್ರಿ ಮಂಡಿ ಸಾಹುಕಾರ್ ಜಯಣ್ಣಾರ ಅಂಗ್ಡಿಲಿ ಹೊದ್ ತಿಂಗ್ಲು ತಿಪ್ಟೂರಿಗೆ ಕೊಪ್ರಿ ತಗಂಡು ಹೋದಾಗ. ಒಂದು ಪಂಚೆ, ಕೈಲಿ ಒಂದು ಕೋಲು ಇಟ್ಕಂಡು ಎಟೋಂದು ಜನ ಅಂತ ಈ ಅಜ್ಜುನಿಂದೆ, ಅಂಗ್ಡೀಲಿ ಇದ್ದೋರೆಲ್ಲ ಹೊಗ್ಳಿ ಮಾತಾಡ್ಕಂತಿದ್ರು. ನಾನು ಈವಜ್ಜುಂಗೆ ಯಾಕ್ ಬೇಕಪ್ಪ ಈ ಮುದಿ ವಯಸ್ಸಲ್ಲಿ ಸತ್ಯಾಗ್ರಹ, ಉಪ್ವಾಸ ಎಲ್ಲ ಮನ್ಲಿ ರೊಟ್ಟಿ-ಪಟ್ಟಿ ಉಂಡ್ಕಂಡು, ಮುದ್ದೆ ಹೊಡಿತ ಮೊಮ್ಮೊಕ್ಲುನ್ನ ಆಡಿಸ್ಕಂಡು ಹಣ್ಣು-ಹಂಪ್ಲು ತಿಂದ್ಕಂಡು ಅರಾಮಾಗಿ ಇರದ್ಬಿಟ್ಟು ಅಂತ ಅಂದ್ಕಂಡು ಬಂದೆ. ನೀನು ಇವತ್ತು ಹೊಸ ರುಲೀಸ್ ಬಗ್ಗೆ ಹೇಳಿದ್ಮೆಲೆ ಈ ವಜ್ಜ ಮಾಡ್ತಿರದೆ ಸೈ ಅಂತ ಅನ್ನುಸ್ತ ಅದೆ. ಗಾಂಧೀಜಿಗೆ ಜಯ ಸಿಗ್ಲಪ್ಪ, ನಮ್ಗೆ ಬಿಡುಗಡೆ ಸಿಕ್ಕಿದಂಗಾಗುತ್ತೆ ಈ ಮುಂಡೆಮಕ್ಳು ಇಂಗ್ಲಿಷ್ನೊವ್ರಿಂದ" ಅಂತ ದಿಣ್ಣೆಮನೆ ಶಿವಪ್ಪನವ್ರು ಎದುರಿಗಿದ್ದ ಅಮ್ಮನ ಗುಡಿಗೆ ಕೈ ಮುಗಿದರು.
"ಸರಿ ಶಾನ್ಬೋಗಪ್ಪ, ಮುಂದೆ ಎಂಗಪ್ಪ ಮಾಡದೀಗ? ಎಲ್ಲರುವೆ ಬೆಳೆಯೊ ಬೆಲೆ-ಕಾಳು, ದಿನ್ಸಿ ಧಾನ್ಯ ಎಲ್ಲಾದುಕ್ಕುವೆ ಕಂದಾಯ ಕಟ್ಲೇ ಬೇಕ?" ಅಂತ ಪಟೇಲರು ಮಾತನ್ನು ಹೊಸ ಕಂದಾಯದ ನಿಯಮದ ಕಡೆಗೆ ಎಳೆದರು.
"ಹೂ ಪಟೇಲ್ರೆ, ಸರ್ಕಾರದ್ ಆಘ್ನೆ ಅಂದ್ರೆ ಆಗೋತು, ಯಾರು ತಪ್ಪಂಗಿಲ್ಲ, ತಪ್ಪಿದ್ರೆ ಪೊಲಿಸ್ನಾರು ಬಂದು ತುಂಬ್ಕ್ಯಂಡು ಹೊಗ್ತಾರೆ. ನನ್ಗೆ ಇವಾಗ ಜಾಸ್ತಿ ಕೆಲ್ಸ, ಪ್ರತೀ ಒಬ್ರು ಎಷ್ಟು ಬೆಳ್ದವ್ರೆ ಅಂತ ಅವ್ರ ಜಮೀನಿನ ಅಂದಾಜ್ ಮೇಲೆ ಅದುಕ್ ತಕ್ಕಂಗೆ ಕಂದಾಯ ಹಾಕ್ಬೇಕು, ಈಟ್ ದಿನ್ ತಕ್ಕ ಇವೆಲ್ಲ ತಲೆ ನೋವಿರ್ಲಿಲ್ಲ." ಅವ್ರ ಪಜೀತಿ ತೋಡಿಕೊಂಡ್ರು, ಆದರು ಒಂದು ರೀತಿಯಲ್ಲಿ ಶಾನಭೋಗರಿಗೆ ಇದರಿಂದ ಉಪಯೋಗವೆ ಅಗಿತ್ತು ಅನ್ನಿ ಯಾಕೇಂದ್ರೆ ಕಡಿಮೆ ಅಂದಾಜು ಮಾಡಿದ್ರೆ, ರೈತರಿಂದ ಕಾಣಿಕೆಯ ರೂಪದಲ್ಲಿ ಈಗ ಸಿಗುವುದಕಿಂತ ಹೆಚ್ಚು ಸಿಗುವ ಸಂಭವ ಇತ್ತು ಮತ್ತು ತಮ್ಮಗೆ ಇನ್ನಷ್ಟು ಜಾಸ್ತಿ ಅಧಿಕಾರ ಸಿಕ್ಕಿರುವ ಒಳಒಳಗೆ ಸಂತೋಷ ಬೇರೆ ಅನ್ನೋದನ್ನ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ.
"ನೀವೇಳದು ಸರೀನೆಯ, ಈ ಪೊಲಿಸ್ನೊರ್ ಕೈಗೆ ಸಿಕ್ಕ್ರೆ ರಕ್ತ ಈರಿಬಿಡ್ತಾರೆ ಕಣಪ್ಪ, ಅವ್ರ ಸಹವಾಸವೇ ಬೇಡ ಏನೊ ಉಪಾಯ್ವಾಗಿ ಬಗೆ ಹರಿಸ್ಕ್ಯಂಡು ಕಂದಾಯ ಕಟ್ಕ್ಯಂದು ಹೊಗಣ ಎಲ್ಲಾರುವೆ" ಅಂತ ಹೊನ್ನಪ್ಪನೊರು ವ್ಯಾವಹಾರಿಕಾವಾಗಿ ಶಾನಭೋಗ್ರಿಗೆ ಅರ್ಥ ಹಾಗುವ ಹಾಗೆ ಹೇಳಿ, ಶಾನುಭೋಗರಿಗೆ ಮತ್ತಷ್ಟು ಮನಸಂತೋಷ ಪಡುವಂತೆ ಮಾಡಿದರು.
"ಸರಿ ಪಟೇಲ್ರೆ, ಸಂಜೆ ಹೊತ್ತು ಮುಳ್ಗಿದ್ಮ್ಯಾಲೆ ಊರಿನ ಎಲ್ಲಾರ್ನು ಗುಡಿ ಅತ್ರ ಬರಕ್ಕೆ ಹೆಳ್ಬೆಕಲ್ರ, ಈ ಹೊಸ ರುಲೆಸ್ ಬಗ್ಗೆ ಹೇಳೊಕ್ಕೆ" ಅಂತ ಶಾನಭೋಗ್ರು ಪಟೇಲ್ರತ್ರ ಒಂದು ಸಾರಿ ಕಣ್ಣಾಯಿಸಿದರು.
ಪಟೇಲ್ ಗುಂಡೇಗೌಡ್ರು ಕುಲವಾಡಿ ಮಾಯನ್ನ ಕರೆಸಿ "ಲೇ ಮಾಯ, ಊರೊಳಿಕೆಲ್ಲ ಹೊಗಿ ಇವತ್ ಸಂಜಿಗೆ ಎಲ್ಲಾರುವೆ ಅಮ್ಮನ ಗುಡಿತಾವ, ಮನಿಗೆ ಒಂದೊಂದು ಹಾಳಂತೆ ಬರ್ಲೆಬೆಕಂತೆ, ಶಾನ್ಭೊಗ್ರುವೆ ಪಟೇಲ್ರುವೆ ಆಘ್ನೆ ಮಾಡವ್ರೆ ಅಂತ ತಮ್ಟೆ ಬಡ್ಕಂದು ಸಾರ್ಕ್ಯಂಡು ಬಾ ಹೊಗ್ಲ"
ಮಾಯ ಕುತುಹಲದಿಂದ "ಯಾಕ್ ಬುದ್ದಿ, ಏನ್ ಇಸ್ಯ?"
ಪಕ್ಕದಲ್ಲೆ ಮೊದಲೆ ರೋಷದಲ್ಲಿದ್ದ ಶಿವಪ್ನೊವ್ರು, "ಲೆಯ್ ಮುಚ್ಕಂಡು ಹೇಳಿದ್ ಕೆಲ್ಸ ಮಾಡೋಗ್ಲ, ಇಲ್ದವೆಲ್ಲ ಪುಲಾರ ಯಾಕ್ ನಿಂಗೆ, ಲಾಯ್ರಿ ಪಾಯಿಂಟ್ ಮಡುಗ್ತಾವ್ನೆ. ಯಾಕೆ, ಏನು ಅಂತ ಕೆಳ್ತಾವ್ನೆ ಬಾಂಚದ್ ತಗಂಬಂದು" ಅನ್ನುತ್ತ ಅಲ್ಲೆ ಇದ್ದ ಹೊನ್ನಪ್ನೊವು, ಶಾನ್ಭೋಗರು ಮತ್ತೆ ಪಟೇಲರ ಕಡೆ "ಅಲುವ್ರ?" ಅನ್ನುವಂತೆ ನೋಡಿದರು, ಎಲ್ಲಾರು ಸಮ್ಮತಿಸಿದರು ಕೂಡ.
ಮಾಯ ತನಗೆ ಆದ ಮರ್ಯಾದಿಗೆ ಕಂಗೆಡದೆ ತಮಟೆ ತರಲು ತನ್ನ ಮನೆ ಕಡೆಗೆ ಬಿರುಬಿರನೆ ಹೆಜ್ಜೆ ಹಾಕುತ್ತ ನೆಡೆದ.
ಮುಂದುವರೆಯುವುದು.......
No comments:
Post a Comment